ಮಳವಳ್ಳಿ
ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು. ಜಿಲ್ಲೆಯ ಅಗ್ನೇಯ ಭಾಗದಲ್ಲಿದೆ. ಪಶ್ಚಿಮ ಮತ್ತು ದಕ್ಷಿಣದಲ್ಲಿ ತಿರುಮಕೂಡಲು ನರಸೀಪುರ, ಅಗ್ನೇಯದಲ್ಲಿ ಕೊಳ್ಳೇಗಾಲ, ಪೂರ್ವದಲ್ಲಿ ಕನಕಪುರ, ವಾಯುವ್ಯದಲ್ಲಿ ಮಂಡ್ಯ, ಉತ್ತರದಲ್ಲಿ ಮದ್ದೂರು ಮತ್ತು ಚನ್ನಪಟ್ಟಣ ತಾಲ್ಲೂಕುಗಳು ಸುತ್ತುವರಿದಿವೆ. ಕಿರುಗಾವಲು, ಬೊಪ್ಪಗೌಡನಪುರ, ಮಳವಳ್ಳಿ ಮತ್ತು ಹಲಗೂರು ಹೋಬಳಿಗಳು. ಒಟ್ಟು 186 ಗ್ರಾಮಗಳಿವೆ. ವಿಸ್ತೀರ್ಣ 804 ಚಕಿಮೀ. ಜನಸಂಖ್ಯೆ 2,81,345 (2001).
ಕಾವೇರಿ ನದಿಯ ಕಣಿವೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 762 ಮೀಟರ್‍ನಿಂದ 914 ಮೀಟರ್ ಎತ್ತರದಲ್ಲಿ ಇದೆ. ಇದರ ದಕ್ಷಿಣ ಭಾಗದಲ್ಲಿ ಬಿಳಿಗಿರಿರಂಗನ ಬೆಟ್ಟದಿಂದ ಮುಂದುವರಿದ ಕಣಶಿಲೆಯ ಬೆಟ್ಟಗಳು ಕಂಡುಬರುತ್ತವೆ. ಪೂರ್ವ ಭಾಗದಲ್ಲಿ ಸಣ್ಣ ಬೆಟ್ಟಗಳ ಶ್ರೇಣಿ ಹಾದು ಹೋಗಿದೆ. ಕಬ್ಬಾಳದುರ್ಗ ಈ ಭಾಗದ ಅತ್ಯುನ್ನತ ಶಿಖರ (1,069 ಮೀ). ತಾಲ್ಲೂಕಿನ ಹೆಚ್ಚು ಭಾಗ ಸಾಮಾನ್ಯವಾಗಿ ಏರಿಳಿತಗಳಿಂದ ಕೂಡಿ, ಉತ್ತರದಿಂದ ದಕ್ಷಿಣದ ಕಡೆಗೆ ಇಳಿಜಾರಾಗಿದೆ. ಕಾವೇರಿ ನದಿ, ತಾಲ್ಲೂಕಿನ ದಕ್ಷಿಣ ಮೇರೆಯಾಗಿ ತಿರುಮಕೂಡಲು ನರಸೀಪುರ ಮತ್ತು ಕೊಳ್ಳೇಗಾಲ ತಾಲ್ಲೂಕನ್ನು ಬೇರ್ಪಡಿಸುತ್ತದೆ. ಇದು ತಾಲ್ಲೂಕಿನ ಅಗ್ನೇಯದ ಅಂಚಿನಲ್ಲಿ, ಬೆಳಕವಾಡಿಯ ಹತ್ತಿರ ಇಬ್ಭಾಗವಗಿ ಶಿವನ ಸಮುದ್ರ ಎಂಬ ದ್ವೀಪ ರೂಪಿಸಿ ಮುಂದೆ ಈ ಸೀಳುಗಳು ಕಂದರದ ಮೂಲಕ ಹರಿದು ಸುಮಾರು 92 ಮೀಟರ್ ಎತ್ತರದಿಂದ ಗಗನಚುಕ್ಕಿ ಮತ್ತು ಭರಚುಕ್ಕಿಗಳೆಂಬ ಜಲಪಾತಗಳಾಗಿ ಧುಮುಕುತ್ತದೆ. ಮಳವಳ್ಳಿ ತಾಲ್ಲೂಕಿನ ಹೆಚ್ಚು ಭಾಗ ಕಾವೇರಿ ಮತ್ತು ಶಿಂಷಾ ನದಿಗಳ ಬಯಲು ಪ್ರದೇಶ.

ಈ ತಾಲ್ಲೂಕಿನ ನೆಲಮಾಕನಹಳ್ಳಿ, ಗುರುದೇವರಹಳ್ಳಿ ಮತ್ತು ಅರಸಿನ ಕೆರೆಯ ಬಳಿ ಕೊರಂಡಮ್ ದೊರೆಯುತ್ತದೆ. ಕನ್ನಳ್ಳಿ ಹತ್ತಿರದ ಸೂಳೆಕೆರೆ ಪ್ರದೇಶದಲ್ಲಿ ಚೌಳುಪ್ಪು ಸಿಗುವುದು. ಮಳವಳ್ಳಿ, ಹಲಗೂರು ಮತ್ತು ಶಿವಸಮುದ್ರಗಳ ಸುತ್ತಮುತ್ತ ಕಬ್ಬಿಣಾಂಶವುಳ್ಳ ಮ್ಯಾಗ್ನಟೈಟ್ ಶಿಲೆಗಳಿವೆ.
ತಾಲ್ಲೂಕಿನಲ್ಲಿ ವರ್ಷಪೂರ್ತಿ ಹಿತಕರ ಹವೆ ಇರುತ್ತದೆ. ತಾಲ್ಲೂಕಿನ ಹೆಚ್ಚು ಭಾಗದಲ್ಲಿ ಒರಟಾದ ಮರಳುಮಿಶ್ರಿತ ಮತ್ತು ಜೇಡುಮಿಶ್ರಿತ ಕೆಂಪುಮಣ್ಣು ಕಂಡು ಬರುವುದು. ಭೂಮಿ ಅಷ್ಟಾಗಿ ಫಲವತ್ತಾಗಿಲ್ಲ ಆದರೆ ಹಳೆ ಕಾಲುವೆ ಪ್ರದೇಶಗಳಲ್ಲಿಯ ಜೇಡುಮಣ್ಣು ಹೆಚ್ಚು ಫಲವತ್ತಾದ್ದು. ಮಳವಳ್ಳಿಗೆ 19 ಕಿಮೀ ದೂರದಲ್ಲಿರುವ ಹರಡಿಹಳ್ಳದ ಕೆರೆ, ಕಾವೇರಿ ಮತ್ತು ಶಿಂಷಾ ನದಿಗಳ ಕಟ್ಟೆಗಳಿಂದ ಬರುವ ಕಾಲುವೆಯ ಶಾಖೆಗಳು ಮತ್ತು ಭೀಮಾ ತೊರೆಗೆ ದಳವಾಯಿ ಕೋಡಿಹಳ್ಳಿ ಹತ್ತಿರ ನಿರ್ಮಿಸಿರುವ ಜಲಾಶಯ-ಇವು ಈ ತಾಲ್ಲೂಕಿನ ಮುಖ್ಯನೀರಾವರಿ ಸೌಲಭ್ಯಗಳು. ಬತ್ತ, ರಾಗಿ, ಚೋಳ ಈ ತಾಲ್ಲೂಕಿನ ಮುಖ್ಯ ಬೆಳೆಗಳು. ಇದು ಮಂಡ್ಯ ಜಿಲ್ಲೆಯಲ್ಲೇ ಚೋಳ ಬೆಳೆಯುವ ಪ್ರಮುಖ ಪ್ರದೇಶ. ನೆಲಗಡಲೆ, ಕಬ್ಬು, ದ್ವಿದಳ ಧಾನ್ಯಗಳು, ಹಿಪ್ಪುನೇರಳೆ ಇತರ ಹೆಸರಿಸಬಹುದಾದ ಬೆಳೆಗಳು.
ಗೃಹ ಕೈಗಾರಿಕೆಗಳು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಮಾತ್ರ ಈ ತಾಲ್ಲೂಕಿನಲ್ಲಿವೆ. ಇಲ್ಲಿ ರೇಷ್ಮೆ ಹುಳು ಸಾಕಣೆ ಮತ್ತು ಮೊಟ್ಟೆ ತಯಾರುಮಾಡುವ ಬಿತ್ತನೆ ಕೋಠಿಗಳು ವಿಶೇಷವಾಗಿ ಕಂಡುಬರುತ್ತವೆ. ಸಾವಿರಾರು ಕುಟುಂಬಗಳಿಗೆ ಇದೊಂದು ಉಪಕಸಬು. ಮಳವಳ್ಳಿ ಮತ್ತು ಹಲಗೂರುಗಳಲ್ಲಿ ಚರ್ಮ ಮಾಡುವ ಮತ್ತು ಪಾದರಕ್ಷೆಗಳ ತಯಾರಿಕೆಯ ಕೈಗಾರಿಕೆ ಇದೆ. ಹಲವೆಡೆ ಬತ್ತದ ಗಿರಣಿಗಳು, ಕಬ್ಬು ಅರೆಯುವ ಗಾಣಗಳು ಮತ್ತು ಕೈಮಗ್ಗದ ಬಟ್ಟೆ ತಯಾರಿಕೆ ಕೇಂದ್ರಗಳಿವೆ. ಶಿವಸಮುದ್ರದಲ್ಲಿ ವಿದ್ಯುದುತ್ಪಾದನಾಗಾರವಿದೆ.

ಈ ತಾಲ್ಲೂಕಿಗೆ ರೈಲುಸಂಪರ್ಕವಿಲ್ಲ. ಸಮೀಪದ ರೈಲುನಿಲ್ದಾಣ ಮಂಡ್ಯ ಎಲ್ಲ ಗ್ರಾಮಗಳಿಗೂ ರಸ್ತೆ ಸೌಲಭ್ಯ ಉಂಟು. ತಾಲ್ಲೂಕಿನಲ್ಲಿ ಶಿಶುವಿಹಾರಗಳು, ಕಿರಿಯ ಹಾಗೂ ಹಿರಿಯ, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ವಯಸ್ಕರ ಶಿಕ್ಷಣ ತರಬೇತಿಕೇಂದ್ರ ಮತ್ತು ಒಂದು ಕಾಲೇಜು ಇವೆ. ವಿದ್ಯುತ್, ಅಂಚೆ ತಂತಿ ಮತ್ತು ದೂರವಾಣಿ ಸೌಲಭ್ಯಗಳ ಜೊತೆಗೆ ಆಸ್ಪತ್ರೆ ಮತ್ತು ಔಷಧಾಲಯಗಳೂ ಇವೆ. ಒಂದು ಕುಟುಂಬ ಯೋಜನಾ ಕೇಂದ್ರ ಮತ್ತು ಐದು ಪ್ರಾಥಮಿಕ ಆರೋಗ್ಯ ಘಟಕಗಳುಂಟು. ಈ ತಾಲ್ಲೂಕಿಗೆ ಸಂಬಂಧಿಸಿದ ಮುಖ್ಯ ಸ್ಥಳಗಳಲ್ಲಿ ತಾಲ್ಲೂಕಿನ ದಕ್ಷಿಣದ ಎಲ್ಲೆಯ ಬಳಿ ಇರುವ ಶಿವಸಮುದ್ರ ಗಗನಚುಕ್ಕಿ ಭರಚುಕ್ಕಿ ಜಲಪಾತಗಳಿಂದ ಮತ್ತು ವಿದ್ಯುತುತ್ಪಾದನಾಗಾರದಿಂದ ಬಲು ಪ್ರಸಿದ್ಧವಾಗಿದೆ. ಅಲ್ಲದೆ ಶಿಂಷಾಪುರದಲ್ಲಿ ಸಹ ಒಂದು ಚಿಕ್ಕ ವಿದ್ಯುದುತ್ಪಾದನಾಗಾರವಿದೆ. ಮಳವಳ್ಳಿಯ ದಕ್ಷಿಣಕ್ಕೆ ಸುಮಾರು 2 ಕಿಮೀ ದೂರದಲ್ಲಿರುವ ಮಾರೇಹಳ್ಳಿಯಲ್ಲಿ ನರಸಿಂಹ ದೇವಾಲಯವಿದೆ. ಇಲ್ಲಿರುವ 1104ರ ಒಂದು ಕನ್ನಡ ಶಾಸನದಲ್ಲಿ ದೇವಾಲಯವನ್ನು ರಾಜಾಶ್ರಯ ವಿನ್ನಗರಮ್ ಎಂದು ಕರೆಯಲಾಗಿದೆ. ರಾಚಾಶ್ರಯ ಎಂಬುದು ಚೋಳದೊರೆ ಒಂದನೆಯ ರಾಜರಾಜನ ಒಂದು ಬಿರುದಾಗಿತ್ತಾದ್ದರಿಂದ ಈ ದೇವಾಲಯ ಮೂಲತಃ ಅವನ ಕಾಲದ್ದು. ಆದರೆ ಮುಂದೆ ಹೊಯ್ಸಳ ಮತ್ತು ವಿಜಯನಗರ ಆಳ್ವಿಕೆಯ ಕಾಲದಲ್ಲಿ ಅನೇಕ ಸೇರ್ಪಡೆಗಳಾಗಿವೆ. ದೇವಾಲಯದ ಮೂಲ ಲಕ್ಷ್ಮೀನರಸಿಂಹ ಬಲುಸುಂದರ ವಿಗ್ರಹ. ಮೇ ಅಥವಾ ಜೂನ್ ತಿಂಗಳಲ್ಲಿ ನಡೆಯುವ ಈ ದೇವರ ರಥೋತ್ಸವ ಬಹುಜನರನ್ನು ಆಕರ್ಷಿಸುತ್ತದೆ.
ಮಳವಳ್ಳಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಮತ್ತು ಪಟ್ಟಣ; ಮಂಡ್ಯದ ಅಗ್ನೇಯಕ್ಕೆ 28 ಕಿಮೀ ದೂರದಲ್ಲಿದೆ. ಮೈಸೂರಿನಿಂದ ಇಲ್ಲಿಗೆ 42 ಕಿಮೀ. ಬೆಂಗಳೂರಿನಿಂದ 124 ಕಿಮೀ. ಜನಸಂಖ್ಯೆ 35,800 (2001).

ಮಳವಳ್ಳಿಯಲ್ಲಿ ರೇಷ್ಮೆ ಸಾಕಣೆ ಮತ್ತು ಬಿತ್ತನೆ, ಚರ್ಮದ ಕೈಗಾರಿಕೆ ಮತ್ತು ಪಾದರಕ್ಷೆಗಳ ತಯಾರಿಕೆ ಮುಂತಾದ ಗೃಹಕೈಗಾರಿಕೆಗಳಿವೆ. ಈ ಪಟ್ಟಣ ಈ ಪ್ರದೇಶದಲ್ಲಿ ಮುಖ್ಯ ವ್ಯಾಪಾರ ಕೇಂದ್ರ. ಕೃಷಿ ಸಹಕಾರ ವಾಣಿಜ್ಯ ಬ್ಯಾಂಕುಗಳಿವೆ. ಒಂದು ಸರ್ಕಾರಿ ರೇಷ್ಮೆ ಕೋಠಿ ಇದೆ. ಬತ್ತ, ಬೆಲ್ಲ, ಚರ್ಮದ ವಸ್ತುಗಳು ಇಲ್ಲಿಂದ ನಿರ್ಯಾತವಾಗುತ್ತವೆ. ಇಲ್ಲಿ ಹದಿನೈದು ದಿವಸಗಳಿಗೊಮ್ಮೆ ಸಂತೆ ನಡೆಯುತ್ತದೆ. ಪಟ್ಟಣದಲ್ಲಿ ರಕ್ಷಿತನೀರು ಸರಬರಾಜು. ವಿದ್ಯುತ್, ಅಂಚೆ ತಂತಿ ದೂರವಾಣಿ, ಪ್ರಾಥಮಿಕ ಆರೋಗ್ಯಕೇಂದ್ರ ಮುಂತಾದ ಸೌಲಭ್ಯಗಳಿವೆ. ಶಾಲೆಗಳು ಹಾಗೂ ಒಂದು ಕಲೆ ಮತ್ತು ವಿಜ್ಞಾನ ಕಾಲೇಜು ಇದೆ. ಪಟ್ಟಣಪುರಸಭಾಡಳಿತಕ್ಕೆ ಒಳಪಟ್ಟಿದೆ.

ಚಿಕ್ಕದೇವರಾಯ ಒಡೆಯರ ಕಾಲದ 1685ರ ಒಂದು ಶಾಸನದ ಪ್ರಕಾರ ಮಳವಳ್ಳಿ ಅನೇಕ ತರಹದ ಹೂ ಮತ್ತು ಹಣ್ಣುಗಳಿಗೆ ಹೆಸರುವಾಸಿಯಾಗಿದ್ದು ಅನೇಕ ವಿದ್ವಾಂಸರುಗಳಿಂದ ಕೂಡಿತ್ತು. ಇಲ್ಲಿ ಹಿಂದೆ ಇದ್ದ ದೊಡ್ಡ ಕೋಟೆ ಈಗ ಬಲು ಮಟ್ಟಿಗೆ ಹಾಳಾಗಿದೆ. ಕೋಟೆಯ ಭಾಗದ ಒಳಗೆ ಹೊಯ್ಸಳದ ಕಾಲದ ಸಾರಂಗ ಪಾಣಿ ದೇವಾಲಯವಿದೆ. ಮಳವಳ್ಳಿ ಪಟ್ಟಣವನ್ನು ಹೈದರ್ ತನ್ನ ಮಗ ಟಿಪ್ಪುವಿಗೆ ಜಹಗೀರಿಯಾಗಿ ಕೊಟ್ಟಿದ್ದ. ಇದರಿಂದಾಗಿ ಈ ಪಟ್ಟಣ ಒಂದು ವಾಣಿಜ್ಯ ಕೇಂದ್ರವಾಯಿತು. ಬ್ರಿಟಿಷರು ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿಬಂದ ಸಂದರ್ಭದಲ್ಲಿ (1799) ಮಳವಳ್ಳಿಯ ಬಳಿ ಜನರಲ್ ಹ್ಯಾರಿಸ್ ಮತ್ತು ಟಿಪ್ಪುಸುಲ್ತಾನರ ನಡುವೆ ಘೋರಯುದ್ಧ ನಡೆಯಿತು. ಅನಂತರ ಟಿಪ್ಪುಸುಲ್ತಾನ್ ಈ ಸ್ಥಳ ಬ್ರಿಟಿಷರ ಉಪಯೋಗಕ್ಕೆ ಬೀಳಬಾರದೆಂಬ ಉದ್ದೇಶದಿಂದ ಊರನ್ನು ಹಾಳುಗೆಡವಿದೆ. ಟಿಪ್ಪುವಿನ ಪತನಾನಂತರ ಮಳವಳ್ಳಿ ಮತ್ತೆ ಬೆಳೆಯಲಾರಂಭಿಸಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ